Wednesday 5 July 2017

ವಿಜಯನಗರದ ವೀರ ಪುತ್ರ


ಮನದಲ್ಲಿ ಉಳಿದಂಥ ಹಾಡೊಂದೆ ಒಂದು
ಮರೆಯಾಗಿ ಹೋದದ್ದು ನೋಡೆಷ್ಟು ಎಂದು!

ಒಂದು ತಾಯಿಯ 5 ಮಕ್ಕಳಲ್ಲಿ ಒಬ್ಬ ಅತಿ ಪ್ರಸಿದ್ಧನಾದರೆ ಇನ್ನುಳಿದವರು ಎಷ್ಟೇ ಪ್ರತಿಭಾವಂತರಾಗಿದ್ದರೂ ಹಿನ್ನೆಲೆಯಲ್ಲೇ ಉಳಿಯುತ್ತಾರೆ.  ತಾರೆಗಳ ಸ್ವಯಂಪ್ರಭೆ ಎಷ್ಟಿದ್ದರೂ ಹುಣ್ಣಿಮೆ ಚಂದ್ರನ ಎದುರು ಅವು ಮಂಕಾಗುತ್ತವೆ.  ಅದೇ ರೀತಿ ಯಾವುದೇ  ಚಿತ್ರದ ಒಂದು ಹಾಡು ಅತಿ ಜನಪ್ರಿಯವಾದರೆ  ಉಳಿದವು ಕ್ರಮೇಣ ಮರೆಯಾಗಿ ಹೋಗುತ್ತವೆ.  ಹೀಗಾಗಿ ಬೇಡರ ಕಣ್ಣಪ್ಪ ಅಂದರೆ ಶಿವಪ್ಪ ಕಾಯೊ ತಂದೆ, ಭೂ ಕೈಲಾಸ ಅಂದರೆ ರಾಮನ ಅವತಾರ,  ನ್ಯಾಯವೇ ದೇವರು ಅಂದರೆ ಆಕಾಶವೆ ಬೀಳಲಿ ಮೇಲೆ, ಮಿಸ್ ಲೀಲಾವತಿ ಅಂದರೆ ದೋಣಿ ಸಾಗಲಿ, ಸಂತ ತುಕಾರಾಂ ಅಂದರೆ ಜಯತು ಜಯ ವಿಠಲ, ಸೊಸೆ ತಂದ ಸೌಭಾಗ್ಯ ಅಂದರೆ ರವಿವರ್ಮನ ಕುಂಚದ ಕಲೆ ಇತ್ಯಾದಿ ಮಾತ್ರ ನೆನಪಾಗುತ್ತವೆ ಹೊರತು ಆ ಚಿತ್ರಗಳ ಬೇರೆ ಹಾಡುಗಳಲ್ಲ. ಇದೇ ರೀತಿ ವಿಜಯನಗರದ ವೀರ ಪುತ್ರ ಅಂದೊಡನೆ ಅಪಾರ ಕೀರ್ತಿ ಗಳಿಸಿ ಮೆರೆವ ಹಾಡೊಂದೇ ಮನಸ್ಸಿಗೆ ಬರುವುದು.

1962ರಲ್ಲಿ ಬಿಡುಗಡೆಯಾದ ವಿಜಯನಗರದ ವೀರ ಪುತ್ರ ಚಿತ್ರದಲ್ಲಿ ಅಪಾರ ಕೀರ್ತಿ ಅಲ್ಲದೆ ಇನ್ನೂ 6 ಅತಿ ಮಧುರ ಹಾಡುಗಳಿವೆ. 60ರ ದಶಕದಲ್ಲಿ ಇವುಗಳೆಲ್ಲವೂ ಆಕಾಶವಾಣಿ ಬೆಂಗಳೂರು, ಧಾರವಾಡ ನಿಲಯಗಳಲ್ಲಿ ಕೇಳಲು ಸಿಗುತ್ತಿದ್ದರೂ ಕ್ರಮೇಣ ಜನಮಾನಸದಿಂದ ಮರೆಯಾದವು.

ವಿಜಯನಗರದ ವೀರ ಪುತ್ರ ಆರ್. ನಾಗೇಂದ್ರ ರಾಯರ home production ಆಗಿದ್ದು ಮೊದಲ ಬಾರಿಗೆ ಅವರ ಪುತ್ರ ಆರ್. ಎನ್. ಸುದರ್ಶನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆರ್.ಎನ್. ಕೃಷ್ಣ ಪ್ರಸಾದ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿದರೆ ಕಥೆ, ಸಂಭಾಷಣೆ ಮತ್ತು ಹಾಡುಗಳು ಆರ್.ಎನ್. ಜಯಗೋಪಾಲ್ ಅವರದಾಗಿದ್ದವು.  ಸಂಗೀತ ನಿರ್ದೇಶನ ಮಾಡಿದವರು ದಕ್ಷಿಣದ ಶಂಕರ್ ಜೈಕಿಶನ್ ಎಂದು ಖ್ಯಾತರಾಗಿದ್ದ ವಿಶ್ವನಾಥನ್ ರಾಮಮೂರ್ತಿ.  ಇದಕ್ಕೂ ಮುಂಚೆ ಭಕ್ತ ಮಾರ್ಕಂಡೇಯ ಚಿತ್ರಕ್ಕೆ ಸಂಗೀತ ನೀಡಿದ್ದ ಅವರದ್ದು ವಿಶ್ವನಾಥನ್ ರಾಮಮೂರ್ತಿ ಹೆಸರಲ್ಲಿ ಇದು ಕನ್ನಡದ ಕೊನೆಯ ಚಿತ್ರ.  ಮುಂದೆ ರಾಮಮೂರ್ತಿ ಅವರಿಂದ ಬೇರ್ಪಟ್ಟು ಎಂ.ಎಸ್. ವಿಶ್ವನಾಥನ್ ಆಗಿ ಅನೇಕ ಕನ್ನಡ ಚಿತ್ರಗಳಿಗೆ  ಸಂಗೀತ ನೀಡಿದ್ದು ಗೊತ್ತೇ ಇದೆ.

ವಿಜಯನಗರದ ಬೀದಿ ಬದಿಗಳಲ್ಲಿ ಮಾರಲ್ಪಡುತ್ತಿದ್ದವು ಎನ್ನಲಾದ ಮುತ್ತು ರತ್ನಗಳಷ್ಟೇ ಮೌಲ್ಯಯುತವಾದ ಆ ಚಿತ್ರದ ಎಲ್ಲ ಹಾಡುಗಳನ್ನು ಈಗ ಕೇಳೋಣ. ಹಾಡುಗಳಲ್ಲಿ ಏಕತಾನತೆ ಬರದಂತಿರಲು   ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಸ್.ಜಾನಕಿ, ಪಿ.ಲೀಲ, ಪೀಠಾಪುರಂ ನಾಗೇಶ್ವರ ರಾವ್,  ಎಲ್.ಆರ್.ಈಶ್ವರಿ, ಜಮುನಾರಾಣಿ ಮತ್ತು ಮನಮೋಹನ್ ಠಾಕುರ್ ಎಂಬ ನವ ಗಾಯಕ ಇವರನ್ನೊಳಗೊಂಡ ವೈವಿಧ್ಯಮಯ ಗಾಯಕ ಗಾಯಕಿಯರ ಗಡಣವನ್ನೇ ಬಳಸಿಕೊಳ್ಳಲಾಗಿತ್ತು. ಹಾಡು ಕೇಳುತ್ತಾ ಜೊತೆಯಲ್ಲಿ ಓದಿಕೊಂಡು ಆನಂದ ದ್ವಿಗುಣಪಡಿಸಿಕೊಳ್ಳಲು ಮೂಲ ಹಾಡಿನ ಪುಸ್ತಕ ಲಭ್ಯವಿಲ್ಲದ್ದರಿಂದ ನಾನೇ ಒಂದು ಪದ್ಯಾವಳಿಯನ್ನು  ವಿಶೇಷವಾಗಿ ಸಿದ್ಧಪಡಿಸಿದ್ದೇನೆ. ಕ್ಲಿಕ್ಕಿಸಿ scroll ಮಾಡಿ.





ಮಧುರ ಮೋಹನ ವೀಣಾ ವಾದನ
ಪಿ.ಸುಶೀಲ ಹಾಡಿರುವ ಇದು ವೀಣೆಯನ್ನೇ ಕೇಂದ್ರವಾಗಿಟ್ಟುಕೊಂಡು ರಚಿತವಾದ ಹಾಡು.   ಕೆಲವು ಸಾಲುಗಳ ಕೊನೆಯ ದೀರ್ಘ  sustain noteಗಳನ್ನು ಅವರು ಶ್ರುತಿಯೊಂದಿಗೆ ಲೀನಗೊಳಿಸಿದ ಪರಿ ಬಲು ಆಪ್ಯಾಯಮಾನ. ಒಂದು ಕಾಲದಲ್ಲಿ  ವಿಶ್ವನಾಥನ್ ರಾಮಮೂರ್ತಿ ಅವರ  ಸಹಾಯಕನಾಗಿದ್ದ ಜಿ.ಕೆ. ವೆಂಕಟೇಶ್ ಅವರೇ ಈ ಹಾಡಿನಲ್ಲಿ ವೀಣೆ ನುಡಿಸಿರಬಹುದು ಎಂದು ನನ್ನ ಊಹೆ.  ಪಖಾವಜ್, ತಬ್ಲಾಗಳ ಜತೆ  ಕೆಲವು ಕಡೆ ಹಾಡಿನ ನುಡಿಗಳನ್ನು ಯಥಾವತ್ತಾಗಿ ಅನುಕರಿಸುವ ತಬ್ಲಾ ತರಂಗದ ಪ್ರಯೋಗವೂ ಬಲು ಸುಂದರ.  ವೀಣೆಗೆ ಒಂಟಿತನ ಕಾಡಬಾರದೆಂದು ಎರಡನೆ ಚರಣದಲ್ಲಿ ವೇಣುವಿನ ಜತೆಯನ್ನೂ ಒದಗಿಸಲಾಗಿದೆ.  ಜಯಗೋಪಾಲ್ ಅವರು ಸಾಧ್ಯವಾದಲ್ಲೆಲ್ಲ ದ್ವಿತೀಯಾಕ್ಷರ ಪ್ರಾಸ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ.



ಎನ್ಮನ ಮಂದಿರದೇ
ಪಿ.ಬಿ.ಶ್ರೀನಿವಾಸ್ ಮತ್ತು ಪಿ. ಲೀಲ ಜೊತೆಯಾಗಿ ಹಾಡಿರುವುದು ಬಲು ಕಮ್ಮಿ. ಅವರಿಬ್ಬರ ಧ್ವನಿಯಲ್ಲಿ  ಈ ಹಾಡಲ್ಲದೆ  ನನಗೆ ಗೊತ್ತಿರುವುದು  ಗಂಡೊಂದು ಹೆಣ್ಣಾರು ಚಿತ್ರದ ಒಂದು ಅಣಕವಾಡು ಮತ್ತು ನಮೋ ನಮೋ ಶ್ರೀ ಕೃಷ್ಣ ಮುರಾರಿ ಎಂಬ ಕೃಷ್ಣ ಪಾರಿಜಾತ ಪ್ರಸಂಗದ ಹಾಡು ಮಾತ್ರ.  ಬಿ.ಸರೋಜಾದೇವಿ ಅವರಿಗೆ ಯಾವಾಗಲೂ ಪಿ.ಸುಶೀಲ ಅವರೇ ಹಾಡುವುದು ವಾಡಿಕೆ.  ಇಲ್ಲಿ ಅವರಿಗೆ ಪಿ.ಲೀಲ ಧ್ವನಿಯಾದದ್ದು ಇನ್ನೊಂದು ವಿಶೇಷ. ಈ ಹಾಡಿನಲ್ಲಿ ಸಾಹಿತ್ಯ ಭಾಗ ಹೆಚ್ಚಿಲ್ಲದಿದ್ದುದರಿಂದ ದೀರ್ಘ ಆಲಾಪನೆಗಳಿವೆ.  ಚರಣದ ನಂತರ ಪುನಃ ಪಲ್ಲವಿ ಬರುವಾಗ ಚರಣದ  ಕೊನೆಯ ಸಾಲನ್ನೇ ಪಲ್ಲವಿಯ ಮೊದಲ ಸಾಲಾಗಿ ಬಳಸಿಕೊಳ್ಳುವ ವಿಶೇಷ ತಂತ್ರ ನಾನು ಈ ಹಾಡಲ್ಲಿ ಮಾತ್ರ ಗಮನಿಸಿದ್ದು. ಇದು ವೇದ ಪಠಣದಲ್ಲಿ ಪ್ರಯೋಗಿಸಲ್ಪಡುವ ಜಟೆ ಎಂಬ ಪದ್ಧತಿಯನ್ನು ಹೋಲುತ್ತದೆ.   ಕನ್ನಡ ಚಿತ್ರಗಳಲ್ಲಿ ಆಗಿನ ಕಾಲಕ್ಕೆ ಅಪರೂಪವಾಗಿದ್ದ ಹವಾಯಿಯನ್ ಗಿಟಾರ್ ಬಳಕೆ ಈ ಹಾಡಲ್ಲಿದೆ. ಕೊಳಲೂ ಜತೆಗಿದೆ.  ತಾಳವಾದ್ಯವಾಗಿ ತಬ್ಲಾವನ್ನು ವೈವಿಧ್ಯಮಯವಾಗಿ ನುಡಿಸಲಾಗಿದೆ.  ಕೊನೆ ಭಾಗದಲ್ಲಿ  harmonic counter melody ರೂಪದ ಆಲಾಪ ಇದೆ..



ಮಧುಬನದೆ ಹೃದಯವಿದು
ಎಸ್.ಜಾನಕಿ ಧ್ವನಿಯಲ್ಲಿರುವ ಇದು ಜಾನಪದ, ಪಾಶ್ಚಾತ್ಯ ಮತ್ತು ಕಥಕ್ ನೃತ್ಯ ಸಂಗೀತ ಶೈಲಿಗಳ  ಸಂಗಮದಂತಿದೆ. ಅದಕ್ಕೆ ಅನುಗುಣವಾಗಿ ತಬ್ಲಾ, ಢೋಲಕ್, ವಿವಿಧ ರೀತಿಯ ಡೋಲುಗಳು, ಚೌಡಿಕಿಯಂಥ ಜಾನಪದ ತಾಳ ವಾದ್ಯ, ಗಿಟಾರ್, ಕೊಳಲು, ಮ್ಯಾಂಡೊಲಿನ್, ಸಾರಂಗಿ,  ಕಥಕ್ ನೃತ್ಯದ ಬೋಲ್‌  ಇತ್ಯಾದಿಗಳ ಸಂಗಮ ಇಲ್ಲಿದೆ.  ಕೃಷ್ಣನ ಕುರಿತಾದ ತಿಶ್ರ ನಡೆಯ ಈ ಹಾಡಲ್ಲಿ  ಇರುವುದು ದೀರ್ಘ ಪಲ್ಲವಿ ಮತ್ತು ಅದಕ್ಕಿಂತಲೂ ದೀರ್ಘವಾದ ಒಂದು ಚರಣ ಮಾತ್ರ.



ದಾರಿಲಿ ನಿಂತಿಹುದೇಕೆ
ಬೇರೆ ಯಾವ ಚಿತ್ರಗೀತೆಗಳಲ್ಲೂ ಕೇಳ ಸಿಗದಂತಹ  ವಿಶಿಷ್ಟ ರಿದಂ ಪಿ.ಸುಶೀಲ ಮತ್ತು ಮನಮೋಹನ್ ಠಾಕುರ್ ಎಂಬ ನವ ಗಾಯಕ ಹಾಡಿರುವ  ಈ ಹಾಡಿನಲ್ಲಿದೆ.  ಜಾನಪದ ಶೈಲಿಯ ವಾದ್ಯಗಳನ್ನೇ ಬಳಸಲಾಗಿದೆ.  ರಿದಂ ಜತೆಗೆ  whistleನಂತಹ ಸದ್ದು ಮೇಳೈಸಿರುವುದು ಹಾಡಿನ ಅಂದವನ್ನು ಹೆಚ್ಚಿಸಿದೆ. ಆ ಮೇಲೆ ಎಲ್ಲೂ ಹೆಸರು ಕೇಳಿ ಬರದ ಮನಮೋಹನ್ ಠಾಕುರ್  ಬದಲಿಗೆ ಪ್ರಸಿದ್ಧ ಗಾಯಕರು ಇದನ್ನು ಹಾಡುತ್ತಿದ್ದರೆ   ಇದೂ ಇತರ ಸಾಮಾನ್ಯ ಚಿತ್ರಗೀತೆಗಳ ಸಾಲಿಗೇ ಸೇರಿಬಿಡುತ್ತಿತ್ತೋ ಏನೋ. ಇಲ್ಲಿ ಸಂಗೀತ ನಿರ್ದೇಶಕರಾದ ವಿಶ್ವನಾಥನ್ ರಾಮಮೂರ್ತಿ ಅವರು  ಶಂಕರ್ ಜೈಕಿಶನ್ ಅವರ ಜಹಾಂ ಮೈಂ ಜಾತೀ ಹೂಂ ವಹೀಂ ಚಲೆ ಆತೆ ಹೋ  ಹಾಡಿನಿಂದ  ಸ್ಫೂರ್ತಿ ಪಡೆದಿದ್ದಾರೇನೋ ಅನ್ನಿಸುತ್ತದೆ.  ಚಿತ್ರದ ಸನ್ನಿವೇಶದಲ್ಲೂ ಅದೇ ರೀತಿ ನಾಯಕ ನಾಯಕಿ ಒಂದು ಪ್ರದರ್ಶನವನ್ನು ನೋಡುತ್ತಾ ಆ ಮೇಲೆ ತಾವೇ ಆ ಪಾತ್ರಗಳಾಗುವ ತಂತ್ರವನ್ನು ಉಪಯೋಗಿಸಲಾಗಿದೆ.  ಧಾರವಾಡ ಆಕಾಶವಾಣಿಯಿಂದ ಈ ಹಾಡು ಆಗಾಗ ಕೇಳಿ ಬರುತ್ತಿತ್ತು.



ವೈಯಾರ ತೋರುತ
ಆರ್.ನಾಗೇಂದ್ರರಾಯರು ಕನಸಿನ ಸನ್ನಿವೇಶವೊಂದನ್ನು ಸೃಷ್ಟಿಸಿ ತಮಗಾಗಿ ರೂಪಿಸಿಕೊಂಡ ಹಾಡು ಇದು.  ಹಳ್ಳಿಯೂರುಗಳ ವಾಲಗದವರು ಉಪಯೋಗಿಸುವ ಸಮ್ಮೇಳವನ್ನು ಹೋಲುವ ತಾಳವಾದ್ಯದ ಬಳಕೆ ಇದರ ವಿಶೇಷ.  ಕೆ. ಜಮುನಾರಾಣಿ ಸಂಗಡಿಗರೊಂದಿಗೆ ಹಾಡಿದ್ದಾರೆ.  ಧ್ವನಿಮುದ್ರಿಕೆಯಲ್ಲಿರುವ ಹಾಡಿನಲ್ಲಿ ಯಾವುದೇ prelude, interludeಗಳಿಲ್ಲದೇ ಇರುವುದು ಗಮನಾರ್ಹ. ಬಳಸಲಾದ ಕೋರಸ್ ಶಂಕರ್ ಜೈಕಿಶನ್ ಶೈಲಿಯನ್ನು ನೆನಪಿಸುತ್ತದೆ. ಬೆಂಗಳೂರು ಆಕಾಶವಾಣಿಯಿಂದ ಇದು ಆಗಾಗ ಬಿತ್ತರಗೊಳ್ಳುತ್ತಿತ್ತು.



ಮಾತಿನ ಮಲ್ಲ
ಎಲ್.ಆರ್.ಈಶ್ವರಿ ಮತ್ತು ಕನ್ನಡದ ಮನ್ನಾಡೆ ಪೀಠಾಪುರಂ ನಾಗೇಶ್ವರ ರಾವ್ ಧ್ವನಿಯಲ್ಲಿರುವ  ಈ ಹಾಡು ಬಲು ಉಲ್ಲಾಸ ಭರಿತ. ಎರಡೇ ಚರಣಗಳಾದರೂ ಅವು ಸುದೀರ್ಘವಾಗಿರುವುದರಿಂದ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನಾವರಿಸಿತ್ತಿದು.   ನರಸಿಂಹರಾಜು ತಮ್ಮ ಉಬ್ಬು ಹಲ್ಲುಗಳನ್ನೇ ಬಂಡವಾಳವಾಗಿಟ್ಟುಕೊಂಡು ಮೆರೆದವರು.  ಆ ಹಲ್ಲುಗಳ ಉಲ್ಲೇಖವೂ ಇದರಲ್ಲಿದೆ. ಎರಡನೇ ಚರಣದ ಕವ್ವಾಲಿ  ಶೈಲಿ ಬಲು ಆಕರ್ಷಕ. ಹಾಡಿನ ಕೊನೆಗೆ ಬರುವ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಸುಖ ಸಂಸಾರದ ಎರಡು ಕಣ್ಣು ಎಂಬ ಮಾತೂ ಒಪ್ಪತಕ್ಕದ್ದೇ.     ಮ್ಯಾಂಡೊಲಿನ್, ಗಿಟಾರ್, ಕೊಳಲು, ಧೋಲಕ್, ಡೋಲುಗಳ ಸುಂದರ ಸಂಗಮವಿಲ್ಲಿದೆ.   ಖಳನಾಯಕರ ಅಡ್ಡೆಗೆ ನಾಯಕನ ಕಡೆಯವರು ಕಲಾವಿದರಂತೆ ವೇಷ ಮರೆಸಿ ಲಗ್ಗೆಯಿಡುವ ಸಂದರ್ಭದಲ್ಲಿದು ಬಳಕೆಯಾಗಿದೆ.  ಈ ಪರಂಪರೆ ಈಗಿನ ಚಿತ್ರಗಳಲ್ಲೂ ಮುಂದುವರೆದಿದ್ದು ಉಳಿದಂತೆ ಅತಿ ಬುದ್ಧಿವಂತರಾಗಿರುವ ಖಳನಾಯಕನ ಕಡೆಯವರಿಗೆ  ವೇಷಮರೆಸಿ ಬಂದ ನಾಯಕನ ಬಗ್ಗೆ ಕೊಂಚವೂ ಅನುಮಾನ ಯಾಕೆ ಮೂಡುವುದಿಲ್ಲ ಎಂದು ನನಗಂತೂ ಇನ್ನೂ ತಿಳಿದಿಲ್ಲ. ಈ ಹಾಡಿನ  ಮಾತಿನ ಮಲ್ಲ ಮತ್ತು ಹಿಂದಿ ಹಾಡೊಂದರ ಕಾನ್ ಮೆಂ ಝುಮ್ಕಾ ಸಾಲುಗಳು ನಿಮಗೆ ಒಂದೇ ರೀತಿ ಕೇಳಿಸುತ್ತವೆಯೇ?




ಅಪಾರ ಕೀರ್ತಿ
ಅಪಾರ ಪ್ರಸಿದ್ಧಿಯನ್ನು ಪಡೆದು ಚಿತ್ರದ ಇತರ ಹಾಡುಗಳು ಹಿನ್ನೆಲೆಗೆ ಸರಿಯುವಂತೆ ಮಾಡಿದ ಇದರ ಬಗ್ಗೆ ಹೆಚ್ಚೇನೂ ಹೇಳಬೇಕಾದ ಅಗತ್ಯವೇ ಇಲ್ಲ. ಯಾರಾದರೂ ಹಾಡಿಕೊಳ್ಳಬಹುದಾದ ಸರಳ ಟ್ಯೂನ್, ನಾಡಿನ ಹಿರಿಮೆಯನ್ನು ಸಾರುವ ಸಾಹಿತ್ಯ, ನೆನಪಿಟ್ಟುಕೊಳ್ಳಲು ಸುಲಭವಾದ  ಚಿಕ್ಕ ಚಿಕ್ಕ ಪ್ರಾಸಬದ್ಧ ಸಾಲುಗಳು, ಆಕರ್ಷಕ interlude, ಕವಾಯತಿಗೆ ಹೊಂದಿಕೆಯಾಗುವ rhythm pattern ಇತ್ಯಾದಿ ಅಂಶಗಳು    ಪಿ.ಬಿ.ಶ್ರೀನಿವಾಸ್ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟ ಈ ಹಾಡಿನ ಜನಪ್ರಿಯತೆಗೆ ಕಾರಣವಾಗಿರಬಹುದು. ಹಿಂದಿನ ಕಾಲದಲ್ಲಿ  ಸಿನಿಮಾ ಸಂಗೀತಕ್ಕೆ ಶಾಲೆಗಳಲ್ಲಿ ಪ್ರವೇಶವಿಲ್ಲದಿದ್ದರೂ ಈ ಹಾಡು ಆ ನಿಷೇಧಕ್ಕೆ ಒಂದು ಅಪವಾದವಾಗಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಲೇಜಿಮ್ ನೃತ್ಯಕ್ಕೆ ಬಳಕೆಯಾಗುತ್ತಿತ್ತು.   Interludeನಲ್ಲಿ  ಶಿಳ್ಳೆಯನ್ನು ಬಳಸಿಕೊಂಡದ್ದು ಆ ಕಾಲಕ್ಕೆ ಹೊಸ ಪ್ರಯೋಗವಾಗಿತ್ತು.  ಯುದ್ಧಕಾಲದಲ್ಲಿ ಕಹಳೆ ಮೊಳಗುವುದು ಸಾಮಾನ್ಯ.  ಆದರೆ ದಿಕ್ಕು ದಿಕ್ಕಿನಲ್ಲಿ  ಶಾಂತಿ ಸುಖದ  ಕಹಳೆಯನ್ನು ಕೇಳಿಸಿದ್ದು  ಜಯಗೋಪಾಲ್ ಅವರ ಕಡೆಯಿಂದ ಒಂದು ಹೊಸ ಪ್ರಯೋಗ.  ಇದರ ಎರಡನೇ ಚರಣದಲ್ಲಿ ಬರುವ ಒಂದು ಸಾಲನ್ನು ನಾನು ಬಹಳ ಸಮಯ ‘ಜೀವಿಗೆ ತಾ ನೀಡುವನು ಧರ್ಮ ದಧೀಕ್ಷ’ ಎಂದು ಕೇಳಿಸಿಕೊಳ್ಳುತ್ತಿದ್ದೆ.  ಇಂದ್ರನಿಗೆ ವಜ್ರಾಯುಧ ತಯಾರಿಸಲು ತನ್ನ ಬೆನ್ನೆಲುಬನ್ನು ನೀಡಿದ ದಧೀಚಿ ಮಹರ್ಷಿಗೆ ದಧೀಕ್ಷನೆಂಬ ಒಬ್ಬ ತಮ್ಮನಿರಬೇಕು.  ಆತ ಜೀವಿಗಳಿಗೆ ಧರ್ಮ ನೀಡುತ್ತಾನೆ ಅಂದರೆ ಬೋಧಿಸುತ್ತಾನೆ ಎಂದು ನನ್ನದೇ ಅರ್ಥವನ್ನೂ ಕಲ್ಪಿಸಿಕೊಳ್ಳುತ್ತಿದ್ದೆ. ಇಲ್ಲಿ ದೀಕ್ಷೆ ಪದವನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ  ದೀಕ್ಷಾ ಎಂದು ಬಳಸಲಾಗಿದೆ ಎನ್ನುವುದು ನನ್ನ ತಲೆಗೆ ಹೊಳೆಯುತ್ತಿರಲಿಲ್ಲ!
ರೇಡಿಯೋದಲ್ಲಿ ಕೇಳುವಾಗ ಇರದ ಆಲಾಪದೊಂದಿಗೆ ಇಲ್ಲಿ ಹಾಡು ಆರಂಭವಾಗುತ್ತದೆ.







No comments:

Post a Comment

Your valuable comments/suggestions are welcome