Friday 29 March 2013

ರೇಡಿಯೋವನ್ನು ಸಿನಿಮಾ ಟಾಕೀಸ್ ಮಾಡುತ್ತಿದ್ದ ಹಾಡು


     ನಾನು 6ನೇ ತರಗತಿ ಸೇರುವ ಹೊತ್ತಿಗೆ ನಮ್ಮ ಮನೆಗೆ ರೇಡಿಯೋ ಪ್ರವೇಶವಾಗಿತ್ತು.  ನಮ್ಮ ಅಣ್ಣಂದಿರಿಗೆಲ್ಲ ಶಾಸ್ತ್ರೀಯ ಸಂಗೀತ, ಹರಿಕತೆ ಇತ್ಯಾದಿ ಇಷ್ಟವಾದರೆ ನನ್ನ ಮೊದಲ ಆಯ್ಕೆ ಚಿತ್ರಗೀತೆಗಳು. ಆಗೆಲ್ಲ ನಮಗೆ ಸಿನಿಮಾ ನೋಡುವ ಅವಕಾಶ  ಸಿಗುತ್ತಿದ್ದುದು ಬೇಸಗೆ ರಜೆಯಲ್ಲಿ   ನಮ್ಮ ಅಕ್ಕನ ಮನೆಗೆ ಹೋದಾಗ ಕಾರ್ಕಳದ ಜೈಹಿಂದ್ ಟಾಕೀಸಿನಲ್ಲಿ ಉತ್ತಮ ಚಿತ್ರ ಓಡುತ್ತಿದ್ದರೆ ಮಾತ್ರ.    ಈ ರೀತಿ ಜೇನುಗೂಡು, ಕನ್ಯಾರತ್ನ, ಕಿತ್ತೂರು ಚೆನ್ನಮ್ಮ ಚಿತ್ರಗಳನ್ನು ನೋಡಿದ್ದೆ.  ಈ ಚಿತ್ರಗಳ ಹಾಡುಗಳು ರೇಡಿಯೋದಲ್ಲಿ ಕೇಳಿಬಂದಾಗ ಹೆಚ್ಚು ಖುಶಿ ನೀಡುತ್ತಿದ್ದವು. ಅದರಲ್ಲೂ ಸಂಭಾಷಣೆಗಳನ್ನೂ ಒಳಗೊಂಡಿದ್ದ  ಯಾವುದಾದರೂ ಹಾಡಿದ್ದರೆ    ಮತ್ತೆ  ಆ   ಸಿನಿಮಾ ನೋಡಿದ ಅನುಭವವಾಗುತ್ತಿತ್ತು.   ಕಿತ್ತೂರು ಚೆನ್ನಮ್ಮ ಚಿತ್ರದ ಅಂತಹುದೇ ದೇವರು ದೇವರು ದೇವರೆಂಬುವರು ಎಂಬ ಒಂದು ಸವಾಲ್ ಜವಾಬ್  ಹಾಡು  ಆಕಾಶವಾಣಿ ಬೆಂಗಳೂರು ಕೇಂದ್ರದಿಂದ  ಆಗಾಗ ಪ್ರಸಾರವಾಗುತ್ತಿತ್ತು.  ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ 6 ನಿಮಿಷದ ಈ ಹಾಡಿನಲ್ಲಿ   ನರಸಿಂಹರಾಜು, ಬಾಲಕೃಷ್ಣ ಮತ್ತಿತರರ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಆಲಿಸಿದಾಗ ನಾವು ಸಿನಿಮಾ ಟಾಕೀಸಲ್ಲೇ ಇದ್ದೇವೇನೋ ಅನ್ನಿಸುತ್ತಿತ್ತು.  ಎಸ್. ಜಾನಕಿ, ಜೆ.ವಿ.ರಾಘವುಲು, ರುದ್ರಪ್ಪ ಮತ್ತಿತರರು ಹಾಡಿದ್ದ   ಈ ಹಾಡಿಗೆ  ಪಿ.ಬಿ.ಶ್ರೀನಿವಾಸ್ ಅವರ ಕೊಂಚ ಅನುನಾಸಿಕ  ಧ್ವನಿ ವಿಶೇಷ ಮೆರುಗು ನೀಡಿದೆ.  ಚೌಡಕಿ, ತಮ್ಮಟೆ, ತಬ್ಲಾ, ಢೋಲಕ್, ಮೋರ್ ಸಿಂಗ್ ಮುಂತಾದ ವಿವಿಧ  ತಾಳವಾದ್ಯಗಳನ್ನು ಒಳಗೊಂಡ ಇದರಲ್ಲಿ ಮಹಾರಾಷ್ಟ್ರದ  ಢೋಲಕಿಯ ಆಕರ್ಷಕ ನುಡಿತವಿದೆ.  ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿರುವ ವಯಲಿನ್, ಕೊಳಲು, ಮ್ಯಾಂಡೊಲಿನ್, ಕ್ಲಾರಿನೆಟ್ ಮುಂತಾದ  ವಾದ್ಯಗಳ ಯಾವುದೇ interlude ಈ ಹಾಡಿನಲ್ಲಿ ಇಲ್ಲದಿರುವುದನ್ನು ಗಮನಿಸಬಹುದು.

      ಜಿ.ವಿ.ಅಯ್ಯರ್ ಸಾಹಿತ್ಯದ ಈ ಹಾಡಿನ 4:30ನೇ ನಿಮಿಷಕ್ಕೆ ನಿದ್ರೆಯ ಬಗ್ಗೆ  ಸ್ವಾರಸ್ಯಕರವಾದ ವಿಶ್ಲೇಷಣೆಯೊಂದಿದೆ. ಅದರಲ್ಲಿ  ಸ್ವಚ್ಛ ಮನದವರೊಡನೆ ಸರಸವಾಡುವುದು ನಿದ್ದೆ ಎಂಬ ಸಾಲು ನನಗೆ ತುಂಬಾ ಇಷ್ಟ. ಇದೇ ಆಶಯದ ನನ್ನ ಚುಟುಕವೊಂದು ಹೀಗಿದೆ.

ಪರವಸ್ತು ಧನ ಕನಕ ನಿನಗಾಗೆ ಮಣ್ಣು
ನಿತ್ಯ ನಿದ್ರೆಯ ಪಡೆವೆ ಮುಚ್ಚುತಲೆ ಕಣ್ಣು
ಹೊತ್ತದಿರಲೆಂದಿಗೂ ಹೊಟ್ಟೆಯಲಿ ಕಿಚ್ಚು
ಫಲದ ಗೊಡವೆಯ ಬಿಟ್ಟು ದುಡಿಮೆಯನೆ ನೆಚ್ಚು

     H M V ಯವರು ಬಿಡುಗಡೆಗೊಳಿಸಿದ್ದ ಕಿತ್ತೂರು ಚೆನ್ನಮ್ಮ ಚಿತ್ರದ cassette ನಲ್ಲೂ ಒಳಗೊಂಡಿರದ,  ಅಂತರ್ಜಾಲದಲ್ಲೂ ಸುಲಭದಲ್ಲಿ ಸಿಗದ, ರೇಡಿಯೋ ನಿಲಯದವರೂ ಮರೆತ ಈ ಹಾಡು  ನಿಮಗಾಗಿ ಇಲ್ಲಿದೆ.


No comments:

Post a Comment

Your valuable comments/suggestions are welcome